ಬೆಳಕ ಜಗಲಿಯಂಚಿಗೆ
ಒಂದು ಕತ್ತಲಂಥಾ ನೆರಳು
ಕಮ್ಮಗೆ ಕೂತು ನೋಡುತ್ತದೆ.
ಸಣ್ಣಗೆ ಸರಿದೂ ಸರಿಯಲಾರದೆ
ಹರಿದೂ ಹರಿಯಲಾರದೆ
ಕತ್ತಲ ಕಥೆಯ ಮೆಲುಕು ಹಾಕುತ್ತದೆ.
ಕಪ್ಪು ಕತ್ತಲಲ್ಲಿ ಹಗೆ ಇಲ್ಲ ಧಗೆ ಇಲ್ಲ
ಇಲ್ಲ ಅವರು, ಇವರು, ನಾವು, ನೀವು...
ನಿದ್ದೆಗೂ ಎಚ್ಚರಕ್ಕೂ ನಡುವೆ
ಕಾಲುದಾರಿಯ ತುಂಬ ಕನಸುಗಳು
ಅರಳರಳಿ ಘಳಿಗೆ ಘಳಿಗೆಗೊಂದೊಂದು
ಹೊಸಲೋಕ.
ಬೆಳಕಿನೂರಿಂದ ನಡೆದು ಬಂದ ನೆರಳುಗಳು
ಕತ್ತಲಲ್ಲಿ ತಮ್ಮ ರೂಪು ರೇಷೆ ಕಳಕೊಂಡು
ಧಗೆ ಹಗೆ ಕಳಚಿಟ್ಟು
ನೀರಿಗೆ ನೀರು ಬೆರೆತಂತೆ
ಒಂದರಲ್ಲೊಂದು ಬೆರೆತು ಕರಗಿ
ಕತ್ತಲಲ್ಲಿ ಕತ್ತಲಾಗಿ ಹರಿಯುತ್ತವೆ.
ಕೈ ಕೈ ಬೆಸೆಯಲು ಕತ್ತಲಿಗೆ ಕೈಗಳಿಲ್ಲ
ಮುತ್ತಿಡಲು ತುಟಿಗಳಿಲ್ಲ
ಯೋನಿಗಳಿಲ್ಲ ಲಿಂಗಗಳಿಲ್ಲ
ದೇಹಗಳೆಲ್ಲ ಕರಗಿ ಕತ್ತಲಲ್ಲಿ
ನಿರಾಕಾರಕ್ಕೆ ಬೆಸೆದ ನಿರಾಕಾರದ ಇರವು
ಮಾತ್ರ ಕಪ್ಪಗೆ ಹರಡುತ್ತದೆ.
ಕತ್ತಲಾಚೆಗೆ ಕಾಲಿಟ್ಟದ್ದೇ ತಡ
ನೆರಳ ಕಾಲ ಬುಡಕ್ಕೇ
ಅಷ್ಟುದ್ದ ಬೆಳೆದು ನಿಂತ ಅಕರಾಳ ವಿಕರಾಳಗಳು
ಮೊಲೆ ಕಳಚಿಟ್ಟು, ಯೋನಿ ಮುಚ್ಚಿಟ್ಟು,
ಲಿಂಗೈಕ್ಯವಾಗಿ
ಅಖಿಲಾಂಡಕೋಟಿ ಬ್ರಹ್ಮಾಂಡಗಳನಾಳುವ
ತೆವಲಿನಿಂದ, ನೆರಳ ತುಳಕೊಂಡೇ ಓಡಾಡುತ್ತವೆ.
ನೆರಳುಗಳು ತೆಪ್ಪಗೆ ಮೈ ಬಗ್ಗಿಸಿಕೊಂಡು
ಕತ್ತಲಲ್ಲಿ ಕಂಡ ಕನಸುಗಳ ಕುಗ್ಗಿಸಿಕೊಂಡು
ಬೆಳಕ ಜಗಲಿಯಂಚಿಗೆ ಕೂತು
ಮತ್ತೆ ಬರುವ ರಾತ್ರಿಗಳ ಎದುರುನೋಡುತ್ತವೆ
This poem has not been translated into any other language yet.
I would like to translate this poem