ಸತ್ಯದ ಹಾದಿ ಬಲು ಕಠೋರ,
ಸುಳ್ಳಿನ ಹಾದಿ ಬಲು ಹಗುರ..
ಸತ್ಯದ ಬುನಾದಿ ಜೀವನಕ್ಕೆ ಆಶ್ರಯ,
ಸುಳ್ಳಿನ ತಳಹದಿ ಮರಣಕ್ಕೆ ಅಡಿಪಾಯ..
ಸತ್ಯದ ಅರಿವು ಶಿಸ್ತಿನ ಜೀವನಕ್ಕೆ ಅಗತ್ಯ,
ಸುಳ್ಳಿನ ಸುಳಿವು ಅಭದ್ರತೆಯ ಜೀವನಕ್ಕೆ ಸಾಂಗತ್ಯ..
ಸತ್ಯವೇ ಜೀವನದ ಉಸಿದು,
ಸುಳ್ಳೇ ಮರಣದ ಕೆಸರು..
ಸತ್ಯದ ಸಂಗಡಿಗರು ಕೆಲವರು,
ಸುಳ್ಳಿನ ಅಂಗಡಿ ಇಡುವವರು ಸಾವಿರಾರು..
ಸತ್ಯವು ಒಂದು ಅತ್ಯಮೂಲ್ಯ ರತ್ನ,
ಸುಳ್ಳು ಬೀದಿಯಲ್ಲಿ ಹರಾಜಗೋ ಕಲ್ಲಿದ್ದಲು..
ಸತ್ಯವು ಮನೆಯಷ್ಟೇ ಅಲ್ಲ, ದೇಶವನ್ನು ಒಗ್ಗೂಡಿಸುತ್ತೆ,
ಸುಳ್ಳು ಮನೆಯನ್ನು ಹರಾಜಿಗೆ ಹಾಕಿ, ದೇಶವನ್ನು ದ್ವೇಷದ ಜಾಲಕ್ಕೆ ತಳ್ಳುತ್ತೆ..
ಸತ್ಯ ಶಿಕ್ಷಿತ ನಾಗರಿಕರ ಸಂಸ್ಕೃತಿ,
ಸುಳ್ಳು ಆಶಿಕ್ಷಿತ, ದುರ್ನಡತೆಯುಳ್ಳವರ ಪ್ರತಿಕೃತಿ..
ಸತ್ಯ ಮೈಬಗ್ಗಿಸಿ ದುಡಿಯೋನ ಸವಾರಿ,
ಸುಳ್ಳು ದುರುಳ ರಾಜಕಾರಣಿಗಳ ಮೈಸಿರಿ..
ಸತ್ಯದ ಅರಿವು, ಜೀವನದ ತಣಿವು,
ಸುಳ್ಳಿನ ಕೆರೆಯು, ಅವಶೇಷದ ಕೋಣೆಯು..
ಸತ್ಯ ಮಾತಿಗೆ ಭೂಷಣ, ವಿಧೇಯತೆಯ ಲಕ್ಷಣ,
ಸುಳ್ಳು ಮಾತಿಗೆ ಪಾಷಾಣ, ಡೋಂಗಿಗಳ ವಿಲಕ್ಷಣ..
ಸತ್ಯ ಇಂದ್ರಲೋಕಕ್ಕೆ ಸಾಗುವ ಹಾದಿ,
ಸುಳ್ಳು ನರೇಂದ್ರ ಲೋಕದ (ನರ=ಮಾನವಲೋಕ) ಮೂರ್ಖತನದ ಬುನಾದಿ..
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸೂರಿಲ್ಲ,
ಸತ್ಯ ಅಜರಾಮರ, ಸುಳ್ಳು ಒಣಗಿದ ಮರ..
ಎರಡು ಕ್ಷಣದ ಸುಖಕ್ಕಾಗಿ ಸತ್ಯವನ್ನು ದೂರಾಗಿಸದಿರಿ,
ಸತ್ಯವೇ ನಿತ್ಯ,
ಸತ್ಯವೇ ಮಿತ್ಯ
ಸತ್ಯವೇ ಸರ್ವಸ್ವ
*ಶ್ರೀಕ್ರಿಷ್ಣಾರ್ಪಣಮಸ್ತು*
- ಡಾ.ದೀಪಕ ವಿಶ್ವನಾಥ
- ರಚನೆ ೨೫/೩/೨೦೨೩
This poem has not been translated into any other language yet.
I would like to translate this poem