ಅವಳೇನೆಂದು ಅವಳನ್ನು ತಿಳಿದವನೆ ಬಲ್ಲ Poem by PRAVEEN KUMAR Kannada Poems

ಅವಳೇನೆಂದು ಅವಳನ್ನು ತಿಳಿದವನೆ ಬಲ್ಲ

ಅವಳು, ಅಂತಿಂತವಳಲ್ಲ, ಅಂತ: ರಾಳದ ಬೆಂಕಿ,
ಹಿಂಗದ ಚೈತನ್ಯದ, ಬಿಂಕದ ಮಹಾ ಕಾರಂಜಿ;
ಆದರೂ, ವಿನಯ ಸಂಪತ್ತು, ಮಧುರ ಭಾವಗಳ ಸುತ್ತು,
ನಡುವೆ, ತಾನೇ ತಾನಾಗಿ ಸೌಗಂಧ ಚೆಲ್ಲುವ ಗತ್ತು.

ಅವಳು, ಅಂತಿಂತವಳಲ್ಲ, ಹೃದಯ ರಾಜ್ಯದ ಸಾಮ್ರಾಜ್ಞಿ,
ಅದು ಚೆಲುವೋ, ಒಲವೋ, ಅಥವ ಘನಗುಣಗಳ ಕಸರತ್ತೋ;
ಅಂತೂ, ನನಗವಳಿಗಿಂತ ಮೇಲಾದುದಿನ್ನೊಂದಿಲ್ಲ,
ಎತ್ತರಕ್ಕಿಂತೆತ್ತರ ಅವಳು, ವಿಶಾಲಕ್ಕಿಂತ ವಿಶಾಲ.

ಅವಳು, ಅಂತಿಂತವಳಲ್ಲ, ರತ್ನ, ಅಪರಂಜಿ ಚಿನ್ನ,
ಬೆಂಕಿ ಸುಡುವವಳಲ್ಲ, ಹೊಳಪು ಕಳೆಗುಂದುವವಳಲ್ಲ;
ತಾನೆ ತಾನಾಗಿ ಹೊಳೆದು, ಲೋಕ ಬೆಳಗುವವಳು,
ಒಳಗೆ ಘನವಾಗಿದ್ದು, ಹೊರಗೆ ಚೆಲುವು ಚೆಲ್ಲುವವಳು.

ಅವಳು, ಅಂತಿಂತವಳಲ್ಲ, ಎಲ್ಲರಲಿ ಬೆರೆಯುವವಳಲ್ಲ,
ತಾನಾಗಿ ಮೆಚ್ಚಿದರೆ, ಮತ್ತೆಂದೆಂದೂ ಬಿಡುವವಳಲ್ಲ;
ನಯ ವಿನಯದಿ ಒಳಹೊಕ್ಕು, ಬಣ್ಣ ಚಿತ್ತಾರಗಳ ಬರೆದು,
ಸುತ್ತಿ, ಸುತ್ತಿ, ಪ್ರೀತಿ ಬಲೆಯ ಹೊಸೆದು, ತನ್ನನೊಪ್ಪಿಸುವವಳು.

ಅವಳು, ಅಂತಿಂತವಳಲ್ಲ, ಹೊಸತೊಂದು ಲೋಕ,
ಕಷ್ಟ ಕಾರ್ಪಣ್ಯಗಳ ಮರೆಸಿ, ಹೊಸ ಭಾವ ಹರಸುವವಳು;
ನನ್ನನ್ನೆತ್ತೆತ್ತರ ಎತ್ತಿ, ನಾನಾರೆಂದು ನನಗೆ ತೋರಿ,
ಮೌನದಿ ಕಣ್ಣನ್ನು ತೆರೆಸಿ, ಜ್ಞಾನ ಬೆಳಕು ತೋರುವವಳು.

ಅವಳು, ಅಂತಿಂತವಳಲ್ಲ, ಶ್ರೀ ದೇವಿ, ಸೌಮ್ಯತೆಯ ಮೂರ್ತಿ,
ತುಟಿಪೆಟುಕೆನ್ನದೆ, ಹೃದಯ ಸೇತುವೆ ಕಟ್ಟಬಲ್ಲವಳು;
ಕಣ್ಣು ಮಿಂಚಿನ ಝಳದಿಂದ, ತನ್ನೆಲ್ಲ ಭಾವಗಳ ಮುಂದಿಟ್ಟು,
ಬದುಕೆಲ್ಲ ಬೆರೆತು, ಜೀವಕ್ಕೆ ಜೀವವಾಗುವವಳು.
ಅವಳು, ಅಂತಿಂತವಳಲ್ಲ, ಹಿಡಿದ ಪಟ್ಟು ಬಿಡುವವಳಲ್ಲ,
ಮನವೊಲಿದಲ್ಲಿ, ತನ್ನನ್ನು ತಾನೇ ಮುಡಿಪಾಗಿಡುವ ಚೆನ್ನೆ,
ಸತ್ತ್ವಗುಣ ಸಂಪನ್ನೆ, ಲಾವಣ್ಯೆ, ಮನದನ್ನೆ,
ಅವಳೇನೆಂದು, ಅವಳನ್ನು ತಿಳಿದವನೆ ಬಲ್ಲ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success