ನಿನ್ನ ನಾನು, ನನ್ನ ನೀನು ಮರೆವುದೆಂದೂ ಸಾಧ್ಯವೆ?
ಕಣ್ಣು, ಬೆಳಕು ಒಂದನ್ನೊಂದು ಮರೆವುದೆಂದೂ ಸಾಧ್ಯವೆ?
ಸಾವಿರಾರು ವರುಷವೇಕೆ, ಕಾಲದಂಚಿನ ಹೊರಗೂ ನಾವು,
ನೀನು ನಾನು, ನಾನು ನೀನು ಒಬ್ಬರೊಬ್ಬರ ನೆನಪು ಹೆಣಿಗೆ ಬಿಚ್ಚಿ
ದೂರವೆಲ್ಲೋ ಸರಿದು ಮತ್ತೆ ನಮ್ಮ ಬಾಳು ಬದುಕಲುಂಟೆ?
ವಿಶ್ವ ಕ್ಲಿಷ್ಟ ಪ್ರಕ್ರಿಯೆಯಲ್ಲಿ ಏನೇನೋ ಸುತ್ತ ನಡೆಯುವಾಗ,
ನಿನ್ನ ನನ್ನ ಬಾಳ ಚೆಂಡು ಹಿಂದೆ ಮುಂದೆ ಬಡೆದು ಪುಟಿದು
ಎಲ್ಲೆಲ್ಲೋ ಹಾರಿ ಹರಿದು ದೂರ ದೂರ ಸರಿಯುವಾಗ,
ನೆನಪು ಒಂದೆ ನಿನ್ನ ನನ್ನ ಪೋಣಿಸಿಡುವ ಅದೃಶ್ಯ ದಾರ,
ದಾರ ಹರಿದು, ತಂತಿ ಕಡಿದು, ನೀನು ನಾನು ಬದುಕಲುಂಟೆ?
ಜ್ವಾಲೆ ನಂದಿದ ನಂದಾದೀಪ ನಂದಾದೀಪವಾಗುವುದುಂಟೆ?
ನಿನ್ನ ನನ್ನ ನೆನಪಿನದೃಶ್ಯ ದಾರ ನಿನ್ನೆನಾಳೆಯ ಗುಣಕವಲ್ಲ,
ಕಾಲಮೂಲದಿಂದ ಹಿಡಿದು ಕಾಲಾಂತ್ಯವರೆಗಿನದೃಶ್ಯ ತಂತಿ,
ನಿನ್ನ ನನ್ನ ಕೈಯ ಹಿಡಿದು ಕಾಲಗುಂಟ ಮುನ್ನಡೆಸಲಿರುವ
ನಿನ್ನ ನನ್ನ ಆತ್ಮ ಬೆಳಕು, ಹೃದಯ ಬಡಿತ, ಚೇತನ,
ನಿನ್ನಾತ್ಮ ನನ್ನಲ್ಲಿಟ್ಟು, ನನ್ನಾತ್ಮ ನಿನ್ನಲ್ಲಿಟ್ಟು ನಮ್ಮ ನಡೆಸುವ ಸತ್ಯವು,
ಬಾಳಿಗೊಂದು ಲಕ್ಷ್ಯಕೊಟ್ಟು, ಮತ್ತೆ ಮತ್ತೆ ಜನ್ಮಕೊಟ್ಟು,
ನೋವು ಕಷ್ಟ ನಷ್ಟ ಮರೆತು ಬಾಳಗುಂಟ ನಡೆಯುವಂತೆ
ಹಿಂದಿನಿಂದ ಮುಂದಿನಿಂದ ನಡೆಸುವಂತಹ ಪ್ರೇರೇಪಣೆ,
ದಿನ ರಾತ್ರಿ ನೆನಪು ಸ್ಫುರಿಸಿ, ನಿನ್ನನನ್ನಂತರಂಗ ಬೆಸೆದು,
ದಣಿದ ಜೀವ ಚಿಗುರುವಂತೆ ನೀರನೆರೆಯುವ ಬುಗ್ಗೆಯು,
ನವನವೀನ ಚೈತನ್ಯಕೊಟ್ಟು ಮುನ್ನಡೆಸುವಂತಹ ಮಂತ್ರವು.
ಕಾಣದಂತ ದೂರದಲ್ಲಿ, ಮತ್ತಾವುದೋ ಲೋಕದಲ್ಲಿ
ಸದಾ ನನ್ನ ನೆನಪಿನಲ್ಲಿ ನೀನಿರುವೆಯೆಂದು ಗೊತ್ತು ನನಗೆ;
ನಾನಿಲ್ಲಿ ನಿನ್ನ ನೆನಪಿನಲ್ಲಿ, ಹಿಂದುಮುಂದಿನ ಪರಿವೆ ಮರೆತು,
ನಿನ್ನ ಸುಳಿವಿನ ಕುರುಹಿಗಾಗಿ, ನೀನಿರುವ ಲೋಕದ ಪತ್ತೆಗಾಗಿ,
ಧೂಳು ಆಕಾಶಗಂಗೆ ಬಿಡದೆ ಲೋಕವೆಲ್ಲ ಜಾಲಾಡುವೆ;
ಬೇರೆ ನಮಗೆ ಲಕ್ಷ್ಯವಿಲ್ಲ, ಸಾಧ್ಯಸಾಧನೆ ಚಿಂತೆಯಿಲ್ಲ,
ಕಾಲಕಾಲ ಕೂಡಿದಾಗ ಎಲ್ಲ ಕೂಡುವುದೆಂಬ ಸತ್ಯ
ಬಲ್ಲ ನಮ್ಮ ಅದೇಕೋ ಕೊರಗು ಹಿಡಿದು ಹಿಡಿದು, ಹಿಂಜಿ ಹಿಂಜಿ,
ನಿನ್ನ ನನ್ನ ಬರೆ ನೆನಪಿನಲ್ಲೆ ನಮ್ಮ ಹಿಂಡಿ ಮಾಡಿದೆ;
ಇನ್ನೆಷ್ಟು ದೂರ ನಡೆಯಬೇಕೊ, ಇನ್ನೆಷ್ಟು ಕಾಲ ಕಾಯಬೇಕೊ,
ನೀನು ನಾನು ಮತ್ತೆ ಬೆಸೆದು ನಮ್ಮ ನಮ್ಮನ್ನೆ ಮರೆಯಲು.
This poem has not been translated into any other language yet.
I would like to translate this poem