ನೀನದೆಷ್ಟೆತ್ತರಕ್ಕೇರಿದರೇನು,
ನಿನ್ನುಗಮ ಅಣುವಿನಿಂದಲ್ಲವೇನು;
ನಿನ್ನಸ್ಥಿತ್ವದ ಕೀಲಿ ಕೈ ಅಣುರೇಣು,
ಕೊನೆಗೂ ಸೇರುವ ಗೂಡು, ಪರಮಾಣು.
ಕಣ್ಣಿಗೆ ಕಾಣದ, ಬುದ್ಧಿಗೆ ನಿಲುಕದ
ನಿನ್ನನನ್ನಾಯಾಮಕ್ಕೆ ಅತಿಶಯದ
ಕ್ರಿಯಾಲೋಕದ ಬರೆ ಅಕಸ್ಮಿಕವು ಎಲ್ಲ,
ಮೇಲೆಕೆಳಗೆಂಬ ಬೇಧ ಇಲ್ಲೆಲ್ಲೂ ಇಲ್ಲ.
ಗಿಡಮರಗಳು, ಹುಳುಕ್ರಿಮಿಕೀಟಗಳು,
ಜಲನೆಲಜಂತುಗಳು, ಪ್ರಾಣಿಪಕ್ಷಿಗಳು,
ನಾವು, ನಮ್ಮ ಮೀರಿದ ಜೀವಪ್ರಕಾರಗಳು
ಮೂಲಾಧಾರದ ನಿಲ್ಲದ ಭೌತ ಪ್ರಕ್ರಿಯೆಗಳು.
ನಿರ್ವಾತ ಸ್ಫೋಟಿಸಿದಾಗ ಸ್ಫುರಿಸಿದ ಕ್ರಿಯೆ
ಒಡೆದು ಸಿಡಿದು ಕೂಡುವುದು ಸೃಷ್ಠಿ ಪ್ರಕ್ರಿಯೆ;
ಇಲ್ಲಿ ಸರಿತಪ್ಪು ನ್ಯಾಯನ್ಯಾಯ ಬೇಧವಿಲ್ಲ,
ಈ ಆಕಸ್ಮಿಕಗಳ ಕ್ಷಣಿಕ ಭಾಗ ನಾನುನೀನು ಎಲ್ಲ.
ಮೇಲೇರುವುದು, ಕೆಳಗಿಳಿಯುವುದು
ಸೃಷ್ಠಿ ಕಾಲಸ್ಥಳಗಳ ಶಕ್ತಿಪ್ರಬೇಧದ ಭ್ರಾಂತಿ;
ನಾನು ನೀನೆಂಬ ಪರಿಜ್ಞಾನ ಮೈಗೂಡುವುದು
ಅಣು ಪರಮಾಣುಗಳ ವಿಕಸನದುತ್ಕ್ರಾಂತಿ.
ಇವೆಲ್ಲದರ ಹಿಂದೆ ಕರ್ತೃನೊಬ್ಬನುಂಟೆ,
ಸೃಷ್ಟಿ ಮೀರಿದ ಪ್ರಜ್ಞೆ, ಭವಿಷ್ಯತ್ತೊಂದು ಉಂಟೆ -
ಇದು ನನ್ನ ನಿನ್ನ ಅವಜ್ಞೆಗೆ ಮೀರಿದ ಸತ್ಯ,
ತತ್ತ್ವ ವಿಜ್ಞಾನಗಳೆಂದೂ ಬೇಧಿಸಲಾಗದ ಕೃತ್ಯ.
This poem has not been translated into any other language yet.
I would like to translate this poem