ಮಳೆ, ಸಂಭವೇ ಕಾಲೇ ಕಾಲೇ Poem by PRAVEEN KUMAR Kannada Poems

ಮಳೆ, ಸಂಭವೇ ಕಾಲೇ ಕಾಲೇ

ಮಳೆಯು ಬರುತಿದೆ, ನೋಡಿದಿರ, ಮಳೆಯು ಬರುತಿದೆ,
ಮೋಡದಿಂದ ಕೆಳಗೆ ಇಳಿದು, ಕಾಡು ನಾಡುಗಳನು ತೊಳೆದು,
ಹಚ್ಚಹಸುರು ಹೊದಿಕೆ ಹೊದಿಸಿ, ತಂಪು ಗಾಳಿ ಮೇಡಿಗಿಳಿಸಿ,
ಬಿಸಿಲು ಅಸುರನ ಒದ್ದೋಡಿಸಲು, ಮಳೆಯು ಬರುತಿದೆ,
ಮಳೆಯು ಬರುತಿದೆ, ನೋಡಿದಿರ, ಮಳೆಯು ಬರುತಿದೆ.

ಆಕಾಶ ಬಗೆದು, ಮೋಡ ಸಿಗಿದು, ಗಾಳಿ ಬಿರುಗಾಳಿ ನೆಗೆದು,
ಬೆಳ್ಳಿ ತಂತಿಯಂತೆ ಉದುರಿ, ಚೆಲ್ಲಾಪಿಲ್ಲಿ ಚದರುವಂತ
ನೀರು ರಭಸ ನೋಡಿದಿರ ನೀವು, ಮಳೆಯು ಬರುತಿದೆ;
ಕಂಡದ್ದೆಲ್ಲ ತೊಯ್ದು ಬಿಡುತ, ಧೂಳು ತ್ಯಾಜ್ಯ ಅಳಿಸಿಬಿಡುತ
ಹೊಸತು ಲೋಕ ಚೈತನ್ಯವಾಗಿ ಮಳೆಯು ಬರುತಿದೆ.

ನಿಷ್ಠುರದ ಬೇಸಿಗೆ ಬೆವರು ತೊಳೆಯಲು,
ಮೈಯಡರಿದಂತ ಜಡತ್ವ ಕಳೆಯಲು,
ಗುಡುಗು ಮಿಂಚಿನ ಕುದುರೆಯೇರಿ
ಘೋರ ರಭಸದಲ್ಲಿ ಬಿರು ಮಳೆಯು ಬರುತಿದೆ.

ಹಳ್ಳ ಕೊಳ್ಳ ಕೆರೆ ತೊರೆ ತೋಡುಗಳಲಿ ಹರಿದುಬರುವ,
ಬೆಂದ ಭೂಮಿಗೆ ನವನವೀನ ಹೊಸ ಹೊಸ ಜೀವ ತರುವ,
ಏನೋ ಭಯ, ಉಲ್ಲಾಸ, ಉನ್ಮಾದದ ಹರುಷ ಕೊಡುವ
ತೊಯ್ದ ನೆಲಕೆ ಜೀವ ಚಿಗುರುವ ಮಳೆಯು ಬರುತಿದೆ,
ಬಾಯಾರಿ ನಿಂತ ಜೀವಗಳಲಿ ಕೊನರನ್ನು ತರುತ್ತಿದೆ.

ಹಳತು ಕಳೆದು, ಹೊಸತು ತರುವ ಮಳೆಯು ಬರುತಿದೆ,
ಬೆವರು ಕಳೆದು, ಚೈತನ್ಯ ತರುವ ಮಳೆಯು ಬರುತಿದೆ;
ಬೆಂದ ಭೂಮಿಯನ್ನು ತೊಯ್ದು, ಹಚ್ಚಹಸುರು ಹೊದಿಕೆ ಹೊದಿಸಿ,
ಬಾಯಾರಿದಂತ ಜೀವಕುಲಕೆ ಹೊಸತು ಜೀವ ನೀಡಲೆಂದೆ
ಕಾಲ ಗರ್ಭ ಬಗೆದು ಮಳೆಯು ಸಂಭವೇ ಕಾಲೇ ಕಾಲೇ.

Monday, May 16, 2016
Topic(s) of this poem: nature,philosophy,rain
COMMENTS OF THE POEM
READ THIS POEM IN OTHER LANGUAGES
Close
Error Success