ಭಾರತದ ಪುಣ್ಯಸಂಚಯದ ಗರ್ಭದಿಂದೆದ್ದ ಅನಘ್ರ್ಯ ರತ್ನ,
ಶತಮಾನಗಳ ಕತ್ತಲಿನಿಂದ ಸಿಡಿದೆದ್ದ ಪ್ರಜ್ವಲ ಬೆಳಕು ಪುಂಜ;
ಐಹಿಕದಲ್ಲಿದ್ದು ಐಹಿಕಮುಕ್ತ, ಸನ್ಯಾಸಿ, ಸ್ವಾಮಿ ವಿವೇಕಾನಂದ,
ವೇದಾಂತಗಳ ವಿವೇಕದ ಮೂರ್ತ ಪ್ರಾಂಜಲ ದಿವ್ಯ ರೂಪ.
ಪರಮಹಂಸರ ಹಂಸಕ್ಷೀರ ಯೋಗಪ್ರಜ್ಞೆಯ ಪುಣ್ಯಫಲ,
ಶ್ರೀ ರಾಮಕೃಷ್ಣ ತಪಶ್ಚರ್ಯದಿಂದರಳಿದ ದಿವ್ಯಬಲ, ಛಲ;
ಸ್ವಾಮಿ ವಿವೇಕಾನಂದ ದೇಶ ನೈತಿಕಶಕ್ತಿಯ ನಿಜ ಸ್ವರೂಪ,
ನಿರ್ಭಯ ವಿಶ್ವಾಸದ ಪ್ರಜ್ವಲ ಆಧ್ಯಾತ್ಮಿಕತೆಯ ನಂದಾದೀಪ.
ಪರಕೀಯ ಝಳದಲ್ಲಿ ಆಧ್ಯಾತ್ಮಿಕ ಕ್ಷೀರ ಬತ್ತುತ್ತಿರುವಾಗ,
ಕ್ಷೀರಸಾಗರದಾಳಗಲಗಳ ವಿಶೇಶತೆಯ ಲೋಕಕ್ಕೆ ಬಿತ್ತರಿಸಿ,
ಭಾರತೀಯತೆಯ ಕೆಚ್ಚುನೆಚ್ಚಿನ ಮುಚ್ಚಳ ಬಿಚ್ಚಿತೋರಿಸಿದಾತ,
ಸ್ವಾಮಿ ಶ್ರೀ ನರೇಂದ್ರದತ್ತ, ಶ್ರೀ ರಾಮಕೃಷ್ಣರ ಪರಮ ಭಕ್ತ.
ಆಧ್ಯಾತ್ಮ ಜಡತೆಯಲ್ಲ, ಸಬಲತೆ; ಕ್ರಿಯೆಯಾಧ್ಯಾತ್ಮ ಗುಟ್ಟು,
ಅನುಭವದ ವಿದ್ವತ್ತೆ ನಮ್ಮನಿಮ್ಮ ಜೀವನದತ್ಯುನ್ನತ ಸೊತ್ತು;
ಈ ಲೋಕ ನೈತಿಕ ವ್ಯಾಯಾಮಶಾಲೆಯೆಂದಿಟ್ಟು ಕೊಟ್ಟು
ಕ್ರಿಯವಿಕಸನದ ಸೂತ್ರಸಾರ ಭಾರತದ ಮೂಲೆಮೂಲೆಗಿತ್ತ.
ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಮಂಡಲದೊಳಗೆ
ಸಿಡಿಲುಮಿಂಚಿನ ಬಿಗಿಸಂಕಲ್ಪಕ್ಕೆ ನಮಗೆ ಕರೆಕೊಟ್ಟನಾತ;
ಐಹಿಕ ತ್ಯಜಿಸಿ ಸನ್ಯಾಸಿ, ಭಾರತದ ಉದ್ದಗಲ, ಹೊರಗೆ,
ವೇದಾಂತದ ಚೈತನ್ಯ ದಿನರಾತ್ರಿ ಹಬ್ಬಿ ಅಲೆದಾಡಿದಾತ.
ಕಣ್ಣಮೇಲೆ ಕೈುಟ್ಟು ಕತ್ತಲೆಯೆಂದು ಕೂಗುವವರು ನಾವು,
ನಿರ್ಭಯತೆಯೆ ಸ್ವಾತಂತ್ರ್ಯ, ಭಯವು ಪಾಪನೈತಿಕತೆ, ಸಾವು;
ನೋಡಬೇಡ ಹಿಂದೆ, ನಡೆ ಮುಂದೆಯೆಂದು ಬೆಳಕನಿತ್ತ
ಹೊಸ ಪ್ರಜ್ಞೆ, ಹೊಸ ದಾರಿ ರೂವಾರಿ, ನರೇಂದ್ರನಾಥ ದತ್ತ.
ಒಂದೆ ವಿಶ್ವ, ವಿಶ್ವಕ್ಕೊಂದೆ ಆತ್ಮ, ಒಂದೆ ಅಸ್ಥಿತ್ವವೆಂದು
ಲೋಕ ಸಮಗ್ರತೆಯ ತತ್ವದಲಿ ಅವನು ಜಗತನೆಚ್ಚರಿಸಿದ;
ಆಧ್ಯಾತ್ಮ ಮಹತ್ತಿನತ್ತ ದೇಶವ ಪುನಹ ಪ್ರಚೋದಿಸಿದಾತ
ಹೊಸ ರಾಷ್ಟ್ರಪ್ರಜ್ಞೆಯ ದಿಕ್ಕಲ್ಲಿ ಭರತವರ್ಷವನುತ್ತೇಜಿಸಿದ.
ಆಧ್ಯಾತ್ಮ ಚೈತನ್ಯದ ಕ್ರಿಯಾಚಿಲುಮೆ, ನರೇಂದ್ರನಾಥ ದತ್ತ,
ನಿಶ್ಚೇಷ್ಟ ಪರಿಸರಕ್ಕೆ ಹೊಸಗಾಳಿ ಬೀಸಿ, ಹುರುಪನ್ನು ಕೊಟ್ಟ;
ಹೊಸದಿನದ ಮುಂಬೆಳಗು ತಂಪು ಚೈತನ್ಯ ಚೆಲ್ಲಿ ಹಬ್ಬಿ,
ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಗೆ ದಿಟ್ಟ ಅಡಿಪಾಯವನಿಟ್ಟ.
ಸ್ವಾಮಿ ವಿವೇಕಾನಂದರಿತ್ತ ಬೆಳಕೆಂದೂ ನಂದುವುದಿಲ್ಲ,
ಆಧ್ಯಾತ್ಮದ ಕ್ರಿಯಾವ್ಯಾಖ್ಯೆ ಐತಿಹ್ಯ ಮರೆಯುವಂತಹದಲ್ಲ;
ರಾಮಕೃಷ್ಣ ಪರಮಹಂಸ ಹೃದಯಾರವಿಂದದ ಈ ಬೆಳಕು
ಏರಿಳಿತದ ಮಧ್ಯೆ ಸದಾ ಭಾರತವ ನಡೆಸುವುದು ಮುಂದೆ.
This poem has not been translated into any other language yet.
I would like to translate this poem