ನೇತಾಜಿ ಸುಭಾಷ್‍ಚಂದ್ರ ಬೋಸ್ Poem by PRAVEEN KUMAR Kannada Poems

ನೇತಾಜಿ ಸುಭಾಷ್‍ಚಂದ್ರ ಬೋಸ್

ಸತ್ಯಂಶಿವಂಸುಂದರಂ ರಾಷ್ಟ್ರದ ಬೀಜಮಂತ್ರ,
ರಕ್ತಹೋರಾಟವೊಂದೆ ಸ್ವಾತಂತ್ರ್ಯದ ರಣತಂತ್ರ -
ಎಂಬ ತಪಸ್ಸಲ್ಲೆ ನೇತಾಜಿ ಸುಭಾಷ್‍ಚಂದ್ರ ಬೋಸ್
ಬ್ರಿಟಿಷ್ ಸಾಮ್ರಾಜ್ಯದಡಿಗಲ್ಲನಡಗಿಸಿಯೆ ಬಿಟ್ಟ;
ನಿಸ್ವಾರ್ಥ ಸಾಧನೆಯ ಏಕೈಕ ಮೂರುತಿ ಈತ,
ದೇಶವಿಡಿ ಕನಸಲ್ಲಿ ಮೈಮರೆತು ನಿದ್ರಿಸುವಾಗ,
ಸಿಡಿದೆದ್ದು, ಮಹಾಯುದ್ಧದ ಕುಲುಮೆುಂದೆದ್ದು,
ಬಲಿದಾನಕ್ಕೆ ಭಾರತ ಸದಾಸಿದ್ಧವೆಂದು ಸಾಕ್ಷ್ಯಿಕೊಟ್ಟ;
ಗಾಂಧಿ ನೆಹರು ಸಂಗ್ರಾಮದ ಶಕ್ತಿ ಬೆನ್ನುಹುರಿ ಈತ,
ಭಾರತ ಸ್ವಾತಂತ್ರ್ಯದ ತಳಪಾಯ, ಮೈಕಟ್ಟು ಈತ;
ಸುಭಾಸಿನ ಕೆಚ್ಚುಧೈರ್ಯ, ಗಾಂಧಿಯಹಿಂಸೆಗೆ ಬೆಸೆದು,
ಸಹಸ್ತ್ರ ವರ್ಷದ ಬಳಿಕ ಭಾರತಕೆ ಸ್ವಾತಂತ್ರ್ಯ ಬಂತು;
ನೆಲದಡಿಯೆ ಹಬ್ಬಿ ಸ್ವಾತಂತ್ರ್ಯದ ಹೂವುಹಣ್ಣು ಕೊಟ್ಟ,
ಪದಕೀರ್ತಿಗಳ ಮೀರಿ ದೇಶಕ್ಕೆನೆ ತನ್ನ ಮೈಮನವನಿಟ್ಟ
ಸುಭಾಷ್‍ಚಂದ್ರ ಬೋಸ್ ಭಾರತದ ನಿಜ ದ್ರುವತಾರೆ,
ಭಾರತದೈತಿಹ್ಯದ ಸಾರ್ವಕಾಲೀನ ಪ್ರಜ್ವಲ ಸೂರ್ಯ.

ವಜ್ರದಪಿ ಕಠೋರಾಣಿ, ಮೃದೂನಿ ಕುಸುಮದಪಿ,
ಸ್ವಾತಂತ್ರ್ಯ ಸಂಗ್ರಾಮದ ಚಂಡಮಾರುತ ಹಕ್ಕಿ,
ಭರತವರ್ಷದ ಕ್ರಾಂತಿಯ ಪುಣ್ಯ ಪಿತರೂಪಿ,
ನೇತಗಳ ನೇತ ಶ್ರೀ ಸುಭಾಷ್‍ಚಂದ್ರ ಬೋಸ್;
ಧರ್ಮಯುದ್ಧÀ ಬದ್ಧತೆ ಭಗವದ್ಗೀತೆ ಹಾಡಿರುವಾಗ,
ರಾಷ್ರಗೌರವದೆದುರು ಬೆನ್ನುತೋರಿಸಲೇನೆಂದು,
ರಾಷ್ಟ್ರಪಿತನಿಗೆ ಸರಿದಾರಿ ಬೋಧಿಸಿದ ಜನಾರ್ಧನ,
ರಣರಂಗಕ್ಕೆನೆ ದುಮುಕಿದ ವೀರ ಪಾರ್ಥನೀತ;
ವಾದವಿವಾದದೊಡಲಿಂದ ಚರಿತ್ರೆ ಮೂಡುವುದಿಲ್ಲ,
ಸ್ವಾತಂತ್ರ್ಯ ಕೊಡುವ ಸರಕಲ್ಲ, ಕಿತ್ತುಕೊಳ್ಳವ ಸೊತ್ತು,
ರಾಷ್ರಗೌರವ ಕಾಡಿಬೇಡಿ ಬರುವ ಋಣಭಾರವಲ್ಲೆಂದು
ದೇಶಕ್ಕೆ ತನ್ನನೊಪ್ಪಿಸಿದ ಬೋಸ್ ಏಕಾಂಗಿ ಸೇನಾನಿ;
ಭಾರತದ ಪುಣ್ಯ ತೀರ್ಥಯಾತ್ರಿಕ ತಾನೆಂದು ಬಗೆದು
ಹಿಮಾಲಯಗಳೆತ್ತರ ಏರಿ, ಸಪ್ತ ಸಾಗರಗಳಗಲ ಹಾರಿ,
ಭಾರತಚೈತನ್ಯದಾಳ ಹುಡಿಕಿ ಹುಡುಕಿ, ಬಗೆದು, ಗ್ರಹಿಸಿ,
ಕ್ರಾಂತಿಕಿಡಿುಂದ ಬ್ರಿಟಿಷ್ ಸಾಮ್ರಾಜ್ಯ ನಲುಗಿಸಿದ ಬೆಂಕಿ;
ಕಾಲಗ್ರಹಣದಾಳದಲೀಗ ಬೋಸ್ ಕಾಣಿಸುವುದಿಲ್ಲ,
ಗೊಮ್ಮಟನ ಗಾತ್ರ ಎದುರೆದುರು ಕಾಣಿಸುವುದುಂಟೆ?
ಬರ್ಮ, ಪ್ರಾಚ್ಯದೇಶಗಳ ತುಂಬ ಬೆಂಕಿಹಬ್ಬಿದ ಭಲ್ಲ,
ಅಲೆಕ್ಸಾಂಡರ್, ಸೀಸರ್, ಕೈಸರಿನೆತ್ತರ ಮೀರಿ ನಿಲ್ಲಬಲ್ಲ.

Saturday, April 30, 2016
Topic(s) of this poem: leaders
COMMENTS OF THE POEM
READ THIS POEM IN OTHER LANGUAGES
Close
Error Success